ನರಹರಿ ಪತ್ತಾರ -
	ಹದಿಮೂರನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದ ಒಬ್ಬ ಮರಾಠಿ ಸಂತ ಕವಿ. ವಿಟ್ಠಲನ ಭಕ್ತ. ಕೆಲವು ಅಭಂಗಗಳನ್ನು ರಚಿಸಿದ್ದಾನೆ. ಜಾತಿಯಲ್ಲಿ ಅಕ್ಕಸಾಲಿಗ. ದೇವಗಿರಿಯ ನಿವಾಸಿ. ಆರಂಭದಲ್ಲಿ ಕಟ್ಟಾ ಶಿವಭಕ್ತನಾಗಿದ್ದ. ಒಮ್ಮೆ ಈತನಿಗೆ ಶಿವ-ವಿಷ್ಣು ಇವರ ನಡುವೆ ಯಾವ ಭೇದವೂ ಇಲ್ಲವೆಂಬ ಅರಿವು ಮೂಡಿತಂತೆ. ಅಂದಿನಿಂದ ಈತ ವೈಷ್ಣವ ಧರ್ಮವನ್ನು ಸ್ವೀಕರಿಸಿದಂತೆ ತೋರುತ್ತವೆ. ಅನಂತರ ಈತ ಪಂಢರಪುರದಲ್ಲಿ ಬಂದು ನೆಲೆಸಿದ. ಈತನ ಗುರು ಗೈಬೀನಾಥ. ಈತ 1313ರಲ್ಲಿ ಸಮಾಧಿ ಹೊಂದಿದನೆಂದು ಹೇಳಲಾಗಿದೆ. ಈತ ತನ್ನ ಅಭಂಗಗಳಲ್ಲಿ ಹರಿ-ಹರರು ಒಂದೇ ಎಂಬ ಭಾವನೆಯನ್ನು ವ್ಯಕ್ತಮಾಡಿದ್ದಾನೆ.

	ಈತ ತನ್ನ ಪರಮಾರ್ಥಸಾಧನೆಯಲ್ಲಿಯ ಅಕ್ಕಸಾಲಿಗತನವನ್ನು ಸುಂದರವಾಗಿ ವರ್ಣಿಸಿದ್ದಾನೆ; ಶರೀರದ ಅಗ್ಗಿಷ್ಟಿಕೆಯಲ್ಲಿ ಅಂತರಾತ್ಮನ ಬಂಗಾರ ಕರಗಿಸುವೆ. ತ್ರಿಗುಣದ ಪಡಿಯಚ್ಚಿನಲ್ಲಿ ಬ್ರಹ್ಮರಸವನ್ನು ಸುರಿಯುವೆ. ವಿವೇಕದ ಸುತ್ತಿಗೆಯಿಂದ ಕಾಮ-ಕ್ರೋಧಗಳನ್ನು ಪುಡಿ ಮಾಡುವೆ. ಮನ-ಬುದ್ಧಿಯ ಕತ್ತರಿಯಿಂದ ರಾಮನಾಮದ ಸುವರ್ಣದೆಲೆಗಳನ್ನು ಕತ್ತರಿಸಿ ಜ್ಞಾನದ ತಕ್ಕಡಿಯಲ್ಲಿ ತೂಗಲು ಅದು ಅಮೂಲ್ಯವಾಗುತ್ತದೆ.						   
   (ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ